ಸರಳ ವಿವಾಹ ಆದರ್ಶವಾಗಲಿ
ಜನರೂ ಕೂಡ ಮಾರುಕಟ್ಟೆಯ ಸರಕಾಗಿ, ಆಡಂಬರ, ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಿ ಕೇವಲ ಮುಖವಾಡ ಹೊತ್ತು ಬದುಕುತ್ತಿರುವ ಸಂದಿಗ್ದ ಕಾಲಘಟ್ಟದಲ್ಲಿ ಗಾಂಧಿಯವರ ಆಶಯದ ಸರಳ ಮತ್ತು ಅರ್ಥಪೂರ್ಣ ಬದುಕಿನೆಡೆಗೆ ಮಂಜು ಮತ್ತು ಮೇಘರವರು ಕಾಲಿಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ತುಮಕೂರು ವಿಜ್ಞಾನ ಕೇಂದ್ರದ ಶ್ರೀಯುತ ರಾಮಕೃಷ್ಣಪ್ಪನವರು ಅಭಿಪ್ರಾಯಪಟ್ಟರು.
ಅವರು ಗುಬ್ಬಿ ತಾಲ್ಲೂಕು ಅಂಕಸಂದ್ರದ ಪ್ರೇಮ್ ಕುಮಾರ್ ರವರ ಅರಣ್ಯ ಕೃಷಿ ತೋಟದಲ್ಲಿ ನಡೆದ ಜಿ.ಕೆ. ಮಂಜುನಾಥ್ ಮತ್ತು ಮೇಘರಾಮ್ದಾಸ್ ರವರ ಮಂತ್ರಮಾಂಗಲ್ಯ ವಿವಾಹದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ಪ್ರಣೀತ ಮಂತ್ರಮಾಂಗಲ್ಯವೆಂಬ ಸರಳ ಮತ್ತು ವೈಚಾರಿಕವಾದ ವಿವಾಹ ಮಾದರಿಯಲ್ಲಿ ಆಡಂಬರವಿಲ್ಲದೆ ಸಹಜವಾದ ಪರಿಸರದಲ್ಲಿ,
ಹಸಿರ ನಡುವೆ ನಡೆದ ಸುಂದರ ವಾತಾವರಣದಲ್ಲಿ ಯುವ ಜೋಡಿಗಳಾದ ಜಿ.ಕೆ. ಮಂಜುನಾಥ್ ಮತ್ತು ಮೇಘರಾಮ್ ದಾಸ್ ರವರು ತಮ್ಮ ವೈವಾಹಿಕ ಬದುಕಿಗೆ ಜೊತೆಯಾದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷೆಯಾದ ಡಾ. ಮಲ್ಲಿಕಾ ಬಸವರಾಜು ರವರು ವಧುವರರಿಗೆ ಮಂತ್ರಮಾಂಗಲ್ಯದ ಪ್ರತಿಜ್ಞಾವಿಧಿ ಬೋಧಿಸಿ, ಶುಭ ಕೋರಿದರು.
ಪ್ರೇಮ್ಕುಮಾರ್ ರವರ ಸಹಜ ಕೃಷಿಯ ತೋಟದಲ್ಲಿ ಬಣ್ಣ ಬಣ್ಣದ ಸೀರೆಗಳಿಂದ ಸಿಂಗರಿಸಿದ, ಹಸಿರು ಚಪ್ಪರದ ನಡುವೆ ಶ್ರೀರಾಮಕೃಷ್ಣಪರಮಹಂಸ, ಶ್ರೀಮಾತೆ ಶಾರದಾದೇವಿ ಹಾಗೂ ಮಹಾತ್ಮ ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆರವರ ಪ್ರತಿಕೃತಿಯ ಮುಂದೆ, ಹತ್ತಾರು ಪ್ರಬುದ್ಧ ಮನಸ್ಸುಗಳ ನಡುವೆ ನಡೆದ ಈ ಮಂತ್ರಮಾಂಗಲ್ಯವು ಎಲ್ಲರ ಸಡಗರಕ್ಕೆ ಕಾರಣವಾಗಿತ್ತು.
ಲಾಕ್ಡೌನ್ ನಂತರ ಮನೆಯಲ್ಲಿ ಬಂದಿಯಾಗಿದ್ದ ಮನಸ್ಸುಗಳಿಗೆ ಹಸಿರನುಣಿಸಿ ಆಹ್ಲಾದವನ್ನು ನೀಡಿತು. ಪೋಷಕರ ಜೊತೆಗೆ ಬಂದಿದ್ದ ಪುಟ್ಟ ಪುಟ್ಟ ಮಕ್ಕಳು ಗಿಡಮರಗಳ ನಡುವೆ ಪರಮಾನಂದದಿಂದ ಆಟವಾಡಿದರು, ಸಹಜ ತೋಟದ ನಡುವೆ ಎಲ್ಲರೂ ಪರಸ್ಪರ ಜೊತೆಗೂಡಿ, ಉಭಯ ಕುಶಲೋಪರಿ ವಿಚಾರಿಸಿಕೊಂಡು ಸಾವಯವ ಆಹಾರ ಸೇವಿಸಿದರು, ಒಟ್ಟಾರೆ ಮಂಜು ಮೇಘ ರವರ ವಿವಾಹ ಒಂದು ಆಪ್ತವಾತಾವರಣಕ್ಕೆ ಕಾರಣವಾಯಿತು.
ಮಂತ್ರಮಾಂಗಲ್ಯ ವಿವಾಹದಲ್ಲಿ ಚಿಕ್ಕನಾಯಕನಹಳ್ಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಇಂದಿರಮ್ಮ, ರಾಷ್ಟ್ರೀಯ ಯುವಜನ ಅಭಿವೃದ್ಧಿ ನಿಧಿಯ ಸದಸ್ಯರಾದ ಶ್ರೀ ತಿಪ್ಪೇಸ್ವಾಮಿ ಕೆ.ಟಿ., ಲೇಖಕರಾದ ಮಲ್ಲಿಕಾರ್ಜುನ್ ಹೊಸಪಾಳ್ಯ, ಸಾಹಿತಿ ಕಟಾವೀರನಹಳ್ಳಿ ನಾಗರಾಜು, ಸಂವಾದ ಸಂಸ್ಥೆಯ ರಮೇಶ್ ಚೀಮಾಚನಹಳ್ಳಿ, ಶ್ರೀ ಮುರುಳಿ ಮೋಹನ್ ಕಾಟಿ, ಡಾ. ಮಮತ, ಚಿಕ್ಕನಾಯಕನಹಳ್ಳಿಯ ವಿಶ್ವನಾಥ್ ಅಣೆಕಟ್ಟೆ, ರಂಗಕರ್ಮಿ ಗೋಮಾರದನಹಳ್ಳಿ ಮಂಜುನಾಥ್, ರಂಗಪರಿಚಾರಕ ಪ್ರೇಮ್ ಕುಮಾರ್, ಸಿರಾ ತಾಲ್ಲೂಕಿನ ಸಂಚಲನ ಯುವಜನ ಸಂಘ, ಚಿಗುರು ಯುವಜನ ಸಂಘ, ಆದರ್ಶ ಯುವತಿ ಮಂಡಳಿ, ಹೊಂಬಾಳೆ ಯುವಜನ ಸಂಘ, ಅರಿವು ಯುವಜನ ಸಂಘ, ಅನನ್ಯ ಯುವಜನ ಸಂಘ, ಪ್ರಗತಿ ಯುವಜನ ಸಂಘ, ಸಿರಿ ಯುವಜನ ಸಂಘ, ಬೇರು ಯುವಜನ ಸಂಘ, ಮಾತೃಭೂಮಿ ಯುವಜನ ಸಂಘ, ತಿಪಟೂರು ತಾಲ್ಲೂಕಿನ ತಿರುಮಲ ಯುವಜನ ಸಂಘ, ಗುಬ್ಬಿ ತಾಲ್ಲೂಕಿನ ಬೆಳಕು ಯುವಜನ ಸಂಘ, ಮುಂತಾದ ಸಂಘ ಸಂಸ್ಥೆಗಳ ಪ್ರಿತಿನಿಧಿಗಳು, ಹತ್ತಾರು ಲೇಖಕರು, ಸಾಹಿತಿಗಳು, ಮಂತ್ರ ಮಾಂಗಲ್ಯ ವಿವಾಹಕ್ಕೆ ಸಾಕ್ಷಿಯಾದರು.