ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಆಡಳಿತ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ “ಗೊರಕೆ ಸಾಕು, ಪೊರಕೆ ಬೇಕು” ಅಭಿಯಾನವನ್ನು ನಾಳೆ (ಭಾನುವಾರ 06.12.2020) ಬೆಳಿಗ್ಗೆ 10.30ಕ್ಕೆ ಆರಂಭಿಸಲಾಗುತ್ತದೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾಹಿತಿ ನೀಡಿದರು.
ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬಿಬಿಎಂಪಿ ಹಾಗೂ ಸರ್ಕಾರ ಸೇರಿಕೊಂಡು ಜನರನ್ನು ಹಗಲು ದರೋಡೆ ಮಾಡುತ್ತಿವೆ.
ವಿದ್ಯುತ್ ಬಿಲ್, ಪಾರ್ಕಿಂಗ್ ಶುಲ್ಕ, ಕಸದ ಸೆಸ್, ಆಸ್ತಿ ತೆರಿಗೆ, ನೀರಿನ ಬಿಲ್ ಹೀಗೆ ಒಂದೊಂದೆ ಮೂಲ ಸೌಕರ್ಯಗಳನ್ನು ದುಬಾರಿ ಮಾಡಿ ಜನಸಾಮಾನ್ಯ ಬದುಕಲು ಆಗದಂತಹ ವಾತಾವರಣ ನಿರ್ಮಾಣ ಮಾಡುತ್ತಿದೆ,
ಈ ಎಲ್ಲಾ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಜೊತೆಗೆ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಸರ್ಕಾರ ಉಚಿತ ವಿದ್ಯುತ್, ಅಂತರರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆಗಳು, ಉಚಿತ ಆರೋಗ್ಯ ವ್ಯವಸ್ಥೆ,
ಮಹಿಳೆಯರಿಗೆ ಉಚಿತ ಬಸ್ ಪಾಸ್ ಹೀಗೆ ಜನ ಸಾಮಾನ್ಯರ ಪರವಾಗಿ ಕೆಲಸ ಮಾಡಿ “ದೆಹಲಿ ಮಾದರಿ”ಯನ್ನು ಹುಟ್ಟುಹಾಕಿದ್ದಾರೆ. ಈ ಯಶಸ್ವಿ ಮಾದರಿ ಬಗ್ಗೆ ಅಭಿಯಾನದ ಮೂಲಕ ಮನೆ, ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಆಮ್ ಆದ್ಮಿ ಪಕ್ಷ ಜನರ ಸಮಸ್ಯೆಗಳನ್ನು ಇಟ್ಟುಕೊಂಡು ಈಗಾ ಸರಣಿ ಪ್ರತಿಭಟನೆಗಳನ್ನು ಮಾಡುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್.ವಿ ಮಾತನಾಡಿ, ಈ ಅಭಿಯಾನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮೋದಿ ಆಸ್ಪತ್ರೆ ನವರಂಗ್ ಸೇತುವೆ ಬಳಿ ಭಾನುವಾರ ಬೆಳಿಗ್ಗೆ 10.30ಕ್ಕೆ ಪ್ರಾರಂಭಗೊಂಡು,
ಸಾಣೆಗೊರವನಹಳ್ಳಿ ನೇತಾಜಿ ಪಾರ್ಕ್ ಬಳಿ ಮುಕ್ತಾಯಗೊಳ್ಳುತ್ತದೆ. ಆನಂತರ ಮನೆ, ಮನೆ ಅಭಿಯಾನ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಗುರುಮೂರ್ತಿ, ಮಂಜುನಾಥ್ ನಗರ ವಾರ್ಡ್ ಅಧ್ಯಕ್ಷ ಬಾಲಕೃಷ್ಣ ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.