ಬಂಜಾರ ಜನಾಂಗದ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳ ಮೇಲಾದ ಅತ್ಯಾಚಾರ ಕೊಲೆಯನ್ನು ಖಂಡಿಸಿ ಇಂದು ಸಂಜೆ 4.30 ಕ್ಕೆ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಇರುವ ಗಾಂಧಿ ಪ್ರತಿಮೆಯ ಹತ್ತಿರ ಬೃಹತ್ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು.
ಬಂಜಾರ ಸಮುದಾಯದ ಹಿರಿಯರು, ನಿವೃತ್ತ ಅಧಿಕಾರಿಗಳು, ಯುವಕರು, ಮಹಿಳೆಯರು ಹಾಗೂ ಯುವತಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಸಹೋದರ ಸಮುದಾಯಗಳಾದ ಕೊರಚ,ಕೊರಮ, ಭೋವಿ ಹಾಗೂ ಇನ್ನಿತರೆ ಅನೇಕ ಸಮುದಾಯಗಳ ಮುಖಂಡರುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹೊಸಪೇಟೆ ತಾಲೂಕಿನ ತಾಳೆ ಬಸಾಪುರ ತಾಂಡಾದ ನಿವಾಸಿಯಾದ ಆರತಿಬಾಯಿ ಎನ್ನುವ 12 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಓಡಿಹೋಗಿದ್ದ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯಾದ್ಯಂತ ಪ್ರತಿರೋಧ ವ್ಯಕ್ತವಾಗಿ, ಅತ್ಯಾಚಾರಿಯನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಲವಾರು ಕಡೆ ಪ್ರತಿಭಟನೆಗಳು ಕೈಕೊಂಡಿದ್ದವು..
ಅಪರಾಧಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ಆಗಬೇಕು ಮತ್ತು ಅಪರಾಧಿಗೆ ಈ ಕೃತ್ಯವೆಸಗಲು ಯಾರಾದರೂ ಕುಮ್ಮಕ್ಕು ನೀಡಿದ್ದಲ್ಲಿ ಅಥವ ಅಪರಾಧಿಯ ಪರವಾಗಿ ಯಾರಾದರೂ ಇದ್ದಲ್ಲಿ ತಕ್ಷಣವೇ ಅವರಿಗೂ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಇಂದಿನ ಪ್ರತಿಭಟನೆಯಲ್ಲಿ ಅಗ್ರಹಿಸಲಾಯಿತು. ಜೊತೆಗೆ ವಲಸೆ ಕಾರ್ಮಿಕರ ಬಗ್ಗೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು,
ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವವರ ಮೇಲೆ ಕಠಿಣ ಕ್ರಮವನ್ನು ಜರಿಗಿಸಬೇಕು. ಹಾಗೂ ದಿನೇ ದಿನೇ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು ಹತ್ತಿಕ್ಕಲು ಖಾಸಗಿ ಮಸೂದೆಯನ್ನು ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಯಿತು. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ಅವರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ಕೊಡಬೇಕು ಎಂದು ಅಗ್ರಹಿಸಲಾಯಿತು..

ಅತ್ಯಾಚಾರಿಗಳಿಗೆ ಯಾವುದೇ ಜಾತಿಯ ಬೇಲಿಯಿಲ್ಲವಾದರು ಅತ್ಯಾಚಾರಕ್ಕೆ ಒಳಗಾಗುತ್ತಿರುವವರು ಮಾತ್ರ ಕೆಳಸಮುದಾಯದ ಯುವತಿ ಮಹಿಳೆಯರು ಮಾತ್ರ ಎನ್ನುವುದು ದುಃಖದ ಸಂಗತಿ. ಇವೆಲ್ಲದಕ್ಕೂ ಅಶಿಕ್ಷತೆ, ಬಡತನವೇ ಮೂಲ ಕಾರಣ ಎನ್ನುವುದು ಮಾತ್ರ ಮುಚ್ಚಿಡಲಾಗದ ಸತ್ಯ.
ಪರಿಶಿಷ್ಟ ಜಾತಿಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇದರ ಬಗ್ಗೆ ದೀರ್ಘವಾಗಿ ಆಲೋಚನೆ ಮಾಡಬೇಕು, ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ವಲಸೆ, ಗುಳೇ ಹೋಗುವ ಕಾರ್ಮಿಕರ ಕಲ್ಯಾಣಕ್ಕಾಗಿ ಅಥವಾ ಅವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಏನಾದರೂ ಅಭಿವೃದ್ಧಿ ಕಾರ್ಯಗಳು ಆಗಿದ್ದಲ್ಲಿ ಮಾತ್ರ ಈ ರೀತಿಯ ಘಟನೆಗಳು ಕಡಿಮೆ ಆಗಲು ಸಾಧ್ಯ, ಇಲ್ಲವಾದಲ್ಲಿ ಈ ರೀತಿಯ ದುಷ್ಕೃತ್ಯಗಳು ಬಡವರಿಗೆ ಎಂದಿಗೂ ತಪ್ಪಿದ್ದಲ್ಲ..
ಇಂದಿನ ಈ ಪ್ರತಿಭಟನೆಗೆ ಭಾಗವಹಿಸಿದ ಎಲ್ಲಾ ಸಂಘಟನೆಗಳ ಮುಖಂಡರಿಗೂ, ಹಿರಿಯರಿಗೂ, ಸಹೋದರ ಸಮುದಾಯದ ಮುಖಂಡರಿಗೂ, ಹಾಗೂ ಮಹಿಳೆ/ಯುವತಿಯರಿಗೂ ಅನಂತ ಅನಂತ ಧನ್ಯವಾದಗಳು.
ತಿಪ್ಪ ಸರ್ ನಾಯ್ಕ್ ರಾಜ್ಯಾಧ್ಯಕ್ಷರು ಕರ್ನಾಟಕ ಬಂಜಾರ ಜಾಗೃತಿ ದಳ (ರಿ)
8197278991